ಆಧುನಿಕ ಮಹಿಳೆ – ಒಂದು ಅವಲೋಕನ
— ಹೇಮಲತಾ ಮಹಿಷಿ

ಮಹಿಳೆಯರ ದೃಷ್ಟಿಯಿಂದ ಬಹುಶಃ 20ನೇ ಶತಮಾನದ ಕೊನೆಯ ಭಾಗ ಮತ್ತು 21ನೇ ಶತಮಾನವನ್ನು ಆಧುನಿಕ ಕಾಲವೆಂದು ಗುರುತಿಸಬಹುದು. 1975ರಲ್ಲಿ ವಿಶ್ವಸಂಸ್ಥೆ ಆ ವರ್ಷವನ್ನು ಅಂತರಾಷ್ಟ್ರೀಯ ಮಹಿಳಾ ವರ್ಷವನ್ನಾಗಿ ಘೋಷಿಸಿ, ನಂತರದ 10 ವರ್ಷಗಳನ್ನು ಮಹಿಳಾ ದಶಕವನ್ನಾಗಿ ಘೋಷಿಸಿದಾಗಿನಿಂದ ವಿಶ್ವದಾದ್ಯಂತ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ, ಅವರ ವಿರುದ್ಧದ ತಾರತಮ್ಯ ನೀತಿಯ ಬಗ್ಗೆ, ಪುರುಷಪ್ರಾಧಾನ್ಯದ ಪರಿಸ್ಥಿತಿಯ ಬಗ್ಗೆ ಚರ್ಚೆ ಆರಂಭಗೊಂಡು, ಮಹಿಳೆಯರನ್ನು ಎರಡನೆಯ ದರ್ಜೆಯ ಪ್ರಜೆಗಳಾಗಿ ಕಾಣದೇ, ಅವರಿಗೂ ಸ್ವಾತಂತ್ರ್ಯ-ಸಮಾನತೆ ದೊರಕಬೇಕು, ಶಿಕ್ಷಣ-ಉದ್ಯೋಗ-ಆಸ್ತಿ ಹಕ್ಕು ಇತ್ಯಾದಿ ಎಲ್ಲ ವಿಷಯಗಳಲ್ಲೂ ಸಮಾನ ಅವಕಾಶ-ಹಕ್ಕು ದೊರಕಬೇಕು ಎಂಬುದು ನಮ್ಮ ದೇಶದಲ್ಲಿಯೂ ಅಂಗೀಕೃತಗೊಂಡ ಒಪ್ಪಿತ ರಾಜನೀತಿಯಾಯಿತು, ಸಂವಿಧಾನ ರೂಪುಗೊಂಡಿತು. ಸಾಮಾಜಿಕ-ಆರ್ಥಿಕ-ರಾಜಕೀಯ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯ ನಾರಿಗೆ ಸಮಾನ ಅವಕಾಶ, ಹಕ್ಕುಗಳು ಇರಬೇಕು, ನಮ್ಮ ಸಂವಿಧಾನ ನೀಡಿರುವ ಎಲ್ಲಾ ಸ್ವಾತಂತ್ರ್ಯಗಳು, ಸಮಾನತೆ ಅವಳಿಗೂ ದೊರಕಬೇಕು ಎನ್ನುವ ಉದ್ದೇಶದಿಂದ ನಮ್ಮ ದೇಶದಲ್ಲಿ ಆವರೆಗೆ ಜಾರಿಯಲ್ಲಿದ್ದ ಅನೇಕ ಕಾನೂನುಗಳನ್ನು ತಿದ್ದುಪಡಿ ಮಾಡಲಾಯಿತು, ಹೊಸ ಕಾನೂನುಗಳನ್ನು ಜಾರಿಗೆ ತರಲಾಯಿತು. ಹಿಂದೂ ವಿವಾಹ ಕಾನೂನು, ಹಿಂದೂ ಆಸ್ತಿ ಹಕ್ಕಿನ ಕಾನೂನು, ಹಿಂದೂ ದತ್ತಕ ಕಾನೂನು, ವರದಕ್ಷಿಣೆ ನಿಷೇಧ ಕಾನೂನು, ಬಾಲ್ಯವಿವಾಹ ನಿಷೇಧ ಕಾನೂನು, ಕೌಟುಂಬಿಕ ದೌರ್ಜನ್ಯ ತಡೆ ಕಾನೂನು, ಉದ್ಯೋಗಸ್ಥ ಮಹಿಳೆಯರಿಗೆ ಉದ್ಯೋಗದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದಿಂದ ರಕ್ಷಣೆ ಕೊಡುವ ಕಾನೂನು, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ, ಇತ್ಯಾದಿ ಕಾನೂನುಗಳಲ್ಲದೇ ಲೈಂಗಿಕ ಕಿರುಕುಳ – ಅತ್ಯಾಚಾರದಂತಹ ದುಷ್ಟಕೃತ್ಯಗಳಿಂದ ಮಹಿಳೆಯರನ್ನು ರಕ್ಷಿಸಲು, ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿ, ಮಹಿಳಾಸ್ನೇಹಿ ಪ್ರಕ್ರಿಯೆಯನ್ನು ಅಳವಡಿಸಿ ಮಹಿಳೆಯರಿಗೆ ಆತ್ಮವಿಶ್ವಾಸ, ಧೈರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಯಿತು. ಇವೆಲ್ಲದರ ಉದ್ದೇಶ ಭಾರತದ ನಾರಿಯನ್ನು ಸಾಂಪ್ರದಾಯಿಕ ಬಂಧನದಿಂದ, ಶೃಂಖಲೆಯಿಂದ ವಿಮುಕ್ತಿಗೊಳಿಸಿ, ಸ್ವಾತಂತ್ರ್ಯದೊಂದಿಗೆ ಸಮಾನ ಅವಕಾಶಗಳನ್ನು ಅನುಭವಿಸುವ ಆಧುನಿಕ ನಾರಿಯನ್ನು ರೂಪಿಸುವುದೇ ಆಗಿತ್ತು, ಆ ಮೂಲಕ ಭಾರತ ದೇಶವನ್ನು ಆಧುನಿಕ ಯುಗದೆಡೆಗೆ ಕರೆದೊಯ್ಯುವ ಕನಸೂ ನನಸಾಗುತ್ತಿತ್ತು. ಇವೆಲ್ಲದರ ಹಿನ್ನೆಲೆಯಲ್ಲಿ ನಿಜಕ್ಕೂ ಭಾರತೀಯ ಮಹಿಳೆ ಆಧುನಿಕ ನಾರಿಯಾಗಿದ್ದಾಳೆಯೇ, ಅವಳಿಗೆ ಕೊಡಮಾಡಿರುವ ಸ್ವಾತಂತ್ರ್ಯ-ಸಮಾನತೆ-ಸಮಾನ ಅವಕಾಶಗಳನ್ನು ಅನುಭವಿಸಲು, ಪೂರ್ಣಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಲು ಶಕ್ತಳಾಗಿದ್ದಾಳೆಯೇ, ಇಲ್ಲವಾದಲ್ಲಿ ಅದಕ್ಕೆ ಕಾರಣಗಳೇನು, ಅಡೆ-ತಡೆಗಳೇನು ಎಂಬುದರ ಬಗ್ಗೆ ವಿಮರ್ಶೆ ಮಾಡಲು ಇದು ಸಕಾಲ. 1975ರಿಂದ ಈವರೆಗೆ ಸುದೀರ್ಘ ಯಾತ್ರೆಯನ್ನು ನಡೆಸಿದ್ದೇವೆ. ಈ ಅವಧಿಯಲ್ಲಿ ಗಳಿಸಿದ್ದೆಷ್ಟು, ಕಳೆದುಕೊಂಡಿದ್ದು ಎಷ್ಟು? ಏನೂ ಪ್ರಗತಿ ಆಗಿಯೇ ಇಲ್ಲವೇ, ಬಯಸಿದಷ್ಟು ಬದಲಾವಣೆ ಆಗಿಲ್ಲವೇ, ಪರಿಸ್ಥಿತಿ ಆಶಾದಾಯಕವಾಗಿದೆಯೇ, ನಿರಾಶಾಜನಕವಾಗಿದೆಯೇ? ಬಯಸಿದ್ದು ಈಡೇರದಿರಲು ಕಾರಣವೇನು, ಸಮಾಜವೇ, ಸರ್ಕಾರಗಳೆ, ವ್ಯಕ್ತಿಗಳೇ? ಭಾರತೀಯ ನಾರಿ ಆಧುನಿಕ ನಾರಿಯಾಗಿದ್ದಾಳೆಯೇ?
ಆಧುನಿಕ ನಾರಿ ಎನಿಸಿಕೊಳ್ಳಲು ಇರಬೇಕಾದ ಅರ್ಹತೆ ಲಕ್ಷಣಗಳೇನು? ಸೀರೆ ಉಡುವುದನ್ನು ಬಿಟ್ಟು, ಜೀನ್ಸ್ ಹಾಕಿಕೊಂಡರೆ, ಪಬ್-ಬಾರಿಗೆ ಹೋದರೆ, ಪಾರ್ಟಿಗಳಿಗೆ ಹೋಗಿ ಸ್ವಚ್ಛಂದವಾಗಿ ಬೆರೆತರೆ, ಡೇಟಿಂಗ್ ಮಾಡಿದರೆ ಮಾತ್ರ ಆಧುನಿಕಳಾಗುತ್ತಾಳೆಯೇ? ಉಡುಪಿನ ಬಗ್ಗೆ ಸ್ವಾತಂತ್ರ್ಯ ಇರಬೇಕಾದುದು ಅವಶ್ಯಕ, ಆದರೆ, ಅದಕ್ಕಿಂತ ಮುಖ್ಯವಾದುದು, ಮಹಿಳೆ ಧೈರ್ಯವಾಗಿ, ಆತ್ಮವಿಶ್ವಾಸದಿಂದ ಹೇಗೆ ತನ್ನ ಜೀವನ ರೂಪಿಸಿಕೊಳ್ಳುತ್ತಾಳೆ, ಎದುರಾಗುವ ಕಷ್ಟಗಳನ್ನು, ತೊಂದರೆಗಳನ್ನು ಹೇಗೆ ಎದುರಿಸುತ್ತಾಳೆ, ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳುತ್ತಾಳೆ ಎನ್ನುವುದು. ಕಾನೂನು ಪುಸ್ತಕದಲ್ಲಿರುತ್ತೆ, ಆದರೆ, ಅವಶ್ಯಕವಿದ್ದಾಗ ಅದನ್ನು ಉಪಯೋಗಿಸಿಕೊಳ್ಳುವ ಧೈರ್ಯ ಮಾಡದಿದ್ದಲ್ಲಿ, ಅದು ವ್ಯರ್ಥ. ಹಲವಾರು ವರ್ಷಗಳ ಕಾಲ ಚಳುವಳಿ ಮಾಡಿ ಕಾನೂನು ಜಾರಿಗೆ ತಂದಿದ್ದರೂ ಅದರ ಬಗ್ಗೆ ತಿಳಿವಳಿಕೆ ಇಲ್ಲದ, ಉಪಯೋಗಿಸಿಕೊಳ್ಳಲು ಧೈರ್ಯವಿಲ್ಲದ ಪರಿಸ್ಥಿತಿ ಇದ್ದಲ್ಲಿ ಜೀವನವೂ ಬದಲಾಗುವುದಿಲ್ಲ, ಪರಿಸ್ಥಿತಿಯೂ ಸುಧಾರಿಸುವುದಿಲ್ಲ. ಯಾವಾಗಲೂ ಬದಲಾವಣೆ ಬಯಸದ ಸಮಾಜ, ಬದಲಾವಣೆ ಬಯಸುವ, ಅದಕ್ಕಾಗಿ ಪ್ರಯತ್ನಿಸುವ ವ್ಯಕ್ತಿಗಳಿಗೆ ಅಡ್ಡಗಾಲು ಹಾಕುತ್ತಲೇ ಇರುತ್ತದೆ.
ಕಾನೂನು ಪುಸ್ತಕದಲ್ಲಿರುತ್ತೆ, ಆದರೆ ಅದನ್ನು ಉಪಯೋಗಿಸುವ ಧೈರ್ಯವಿಲ್ಲದಿದ್ದಲ್ಲಿ, ಅದು ವ್ಯರ್ಥ.
ಇಂದು ಮಹಿಳಾ ಶಿಕ್ಷಣಕ್ಕೆ ಬೆಂಬಲವಿದೆ, ಮಹಿಳೆಯರೂ ಶಿಕ್ಷಣ ಪಡೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಸರ್ಕಾರಿ ನೌಕರಿಯಲ್ಲಿ ಮಹಿಳೆಯರಿಗೆ 30% ಉದ್ಯೋಗ ಮೀಸಲಾತಿ ಇದೆ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಮುನ್ನಡೆಯುತ್ತಿದ್ದಾರೆ. ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಆದರೆ ಕೌಟುಂಬಿಕ ದೌರ್ಜನ್ಯದಿಂದ, ಕುಟುಂಬದಲ್ಲಿ ಪುರುಷಪ್ರಾಧಾನ್ಯದಿಂದ, ಕೆಲಸ ಮಾಡುವ ಜಾಗದಲ್ಲಿ ಲೈಂಗಿಕ ಕಿರುಕುಳದಿಂದ ಹೊರಬರಲು ಸಾಧ್ಯವಾಗಿದೆಯೇ? ಕುಟುಂಬ, ಮಕ್ಕಳ ಹೊಣೆಗಾರಿಕೆ, ಮನೆಗೆಲಸದ ಹೊರೆಯಿಂದ ಉದ್ಯೋಗಸ್ಥ ಮಹಿಳೆ ನಲುಗಿ ಹೋಗುತ್ತಿದ್ದಾಳೆಯೇ? ಮಹಿಳೆಯೊಂದಿಗೆ ಅವಳ ಕುಟುಂಬದ ವ್ಯಕ್ತಿಗಳು, ಸಮಾಜವೂ ಆಧುನಿಕವಾಗದ ಹೊರತು ನಾರಿ ನಿಜವಾದ ಅರ್ಥದಲ್ಲಿ ಆಧುನಿಕ ನಾರಿಯಾಗುವುದು ಅಸಾಧ್ಯ. ಮಹಿಳೆ ಹೊರ ಪ್ರಪಂಚಕ್ಕೆ ಕಾಲಿಟ್ಟು ಆರ್ಥಿಕವಾಗಿ ಹೊಣೆಗಾರಿಕೆಯನ್ನು ಹಂಚಿಕೊಳ್ಳುತ್ತಿರುವಾಗ, ಮನೆಯ ಒಳಗಿನ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಪತಿ-ಪತ್ನಿಯರಿಬ್ಬರೂ ಹಂಚಿಕೊಳ್ಳುವುದು ಅವಶ್ಯಕವಾಗುತ್ತದೆ. ಇಂದಿಗೂ ಅದು ಸಂಪೂರ್ಣವಾಗಿ ಮಹಿಳೆಯದೇ ಜವಾಬ್ದಾರಿ ಎಂದು ಸಂಪ್ರದಾಯಕ್ಕೆ ಜೋತುಬೀಳುವ ಸಮಾಜ ಬದಲಾಗದ ಹೊರತು ಘರ್ಷಣೆ ತಪ್ಪಿದ್ದಲ್ಲ. ಕಾನೂನಿನಲ್ಲಿ ಮಹಿಳೆಗೆ ಆಸ್ತಿ ಹಕ್ಕು ಕೊಟ್ಟಿದ್ದರೂ, ನಿಜ ಜೀವನದಲ್ಲಿ ಆಸ್ತಿಯಲ್ಲಿ ಪಾಲನ್ನು ಕೇಳುವುದೇ ತಪ್ಪೆಂದು, ಕೇಳಿದರೆ ಸಂಬಂಧಗಳಿಗೆ ಧಕ್ಕೆ ಬರುವುದೆಂದೂ ಭಾವಿಸಲಾಗುತ್ತದೆ. ಮಹಿಳೆ ಎಷ್ಟೇ ಉನ್ನತ ಶಿಕ್ಷಣ ಪಡೆದು, ಒಳ್ಳೆಯ ಕೆಲಸದಲ್ಲಿದ್ದರೂ ವರದಕ್ಷಿಣೆ ಗಂಡಿನ ಹಕ್ಕು ಎಂದೇ ಪ್ರತಿಪಾದಿಸಲಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಸಂವಿಧಾನವೇ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದರೂ ಅವರ ಪರವಾಗಿ ಪುರುಷರೇ ಅಧಿಕಾರ ಚಲಾಯಿಸುತ್ತಿದ್ದಾರೆ, ಮಹಿಳೆಯರಿಗೆ ನಿಜವಾದ ರಾಜಕೀಯ ಅವಕಾಶ-ಅಧಿಕಾರ ದೊರೆಯದಂತಾಗಿದೆ. ಪಾರ್ಲಿಮೆಂಟ್, ವಿಧಾನಸಭೆಗಳಲ್ಲಂತೂ ಮಹಿಳಾ ಪ್ರತಿನಿಧಿಗಳಿಗೆ ಸಮಾನ ಅವಕಾಶ ಮರೀಚಿಕೆಯಾಗಿದೆ. ಕಾನೂನಿನ ಉಪಯೋಗ ನೆರವು ಪಡೆಯಲು ಅವಶ್ಯಕ ಸೌಲಭ್ಯ ಕಲ್ಪಿಸಲಾಗಿಲ್ಲ. ಮಹಿಳೆಯರ ಮೇಲಿನ ಅತ್ಯಾಚಾರಗಳಿಗೆ ಅವಳನ್ನೇ, ಅವಳ ಉಡುಗೆ-ತೊಡುಗೆಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಕಾನೂನಿನೊಂದಿಗೆ ಸಮಾಜದ/ವ್ಯಕ್ತಿಗಳ ಧೋರಣೆಗಳೂ ಬದಲಾಗದಿದ್ದಲ್ಲಿ, ಬದಲಾವಣೆಗೆ ಅವರು ತೆರೆದುಕೊಳ್ಳದಿದ್ದಲ್ಲಿ ಆಧುನಿಕ ನಾರಿಯ ಪರಿಕಲ್ಪನೆಯೇ ಅರ್ಥಹೀನವಾಗುತ್ತದೆ.
ಕುಟುಂಬ ಮತ್ತು ಸಮಾಜವೂ ಆಧುನಿಕವಾಗದ ಹೊರತು, ನಾರಿ ನಿಜವಾದ ಅರ್ಥದಲ್ಲಿ ಆಧುನಿಕಳಾಗುವುದು ಅಸಾಧ್ಯ.
ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಧೈರ್ಯವಾಗಿ ಮುನ್ನಡೆಯುತ್ತಿದ್ದಾಳೆ. ಸೈನ್ಯದಲ್ಲಿದ್ದಾಳೆ, ಪೈಲಟ್ ಆಗಿದ್ದಾಳೆ, ಬಾಹ್ಯಾಕಾಶ ಯಾತ್ರಿಯಾಗಿದ್ದಾಳೆ, ಪೊಲೀಸ್ ಹುದ್ದೆಯಲ್ಲಿದ್ದಾಳೆ, ವೈದ್ಯೆ, ವಕೀಲೆ, ಇಂಜಿನಿಯರ್, ವಿಜ್ಞಾನಿಯಾಗಿದ್ದಾಳೆ, ಉಪಾಧ್ಯಾಯ ವೃತ್ತಿಯಲ್ಲಿದ್ದಾಳೆ, ಕೃಷಿಕಳಾಗಿದ್ದಾಳೆ, ಕಾರ್ಮಿಕಳಾಗಿದ್ದಾಳೆ. ಅವಳು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು, ತನ್ನ ಕಾರ್ಯಕ್ಷಮತೆಯ ಬಗ್ಗೆ ನಂಬಿಕೆ ಮೂಡಿಸಲು ಬಹಳಷ್ಟು ಶ್ರಮ ಪಡಬೇಕಾಗುತ್ತದೆ, ಮಹಿಳೆ ಈ ಎಲ್ಲಾ ವೃತ್ತಿಗಳಲ್ಲಿ ಸಮಾನ ಸಾಮರ್ಥ್ಯ ಹೊಂದಿದ್ದಾಳೆ ಎಂಬುದನ್ನು ಸಮಾಜ ಇನ್ನೂ ಒಪ್ಪಿಕೊಳ್ಳಬೇಕಾಗಿದೆ, ಅವಳ ಸಾಮರ್ಥ್ಯದ ಬಗ್ಗೆ ಅಪನಂಬಿಕೆಯನ್ನು ಕಳೆದುಕೊಳ್ಳಬೇಕಾಗಿದೆ. ಏನೋ ರಿಯಾಯಿತಿ ಕೊಡುವಂತೆ, Patronage ಮಾಡುವಂತೆ ಮಹಿಳೆಯರ ಕ್ಷಮತೆಯ ಮೌಲ್ಯಮಾಪನ ಮಾಡುವುದು ಸರಿಯಲ್ಲ. ಅಪನಂಬಿಕೆಯನ್ನು ಮೊದಲು ಮನಸ್ಸಿನಿಂದ ದೂರಮಾಡಬೇಕು. ಮಹಿಳೆಯರೂ ರಿಯಾಯತಿಯನ್ನು ಬಯಸಬಾರದು. ತಾನು ಮಹಿಳೆಯಾದ್ದರಿಂದ ತನಗೆ ಪುರುಷರಿಂದ ಬೇರೆಯಾಗಿ ರಿಯಾಯತಿ ಬೇಕು ಎಂದು ನಿರೀಕ್ಷಿಸದೇ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.
ಹಾಗೆಂದು ಮಹಿಳೆಗೆ ಎಲ್ಲಾ ವಿಷಯಗಳಲ್ಲಿಯೂ, ಸಂದರ್ಭಗಳಲ್ಲಿಯೂ ವಿಶೇಷ ಸೌಲಭ್ಯ ಬೇಡವೆನ್ನಲು ಸಾಧ್ಯವೇ? ಮಹಿಳೆಗೆ ಪ್ರಕೃತಿಯೇ ಕೆಲವೊಂದು ಜವಾಬ್ದಾರಿಗಳನ್ನು, ಹೊಣೆಗಾರಿಕೆಯನ್ನು ವಿಧಿಸಿದೆ. ಅದರಲ್ಲಿ ಮಾತೃತ್ವ ಮುಖ್ಯವಾದುದು. ಎಂತಹ ವೃತ್ತಿಪರ ಮಹಿಳೆಗೂ ಈ ಹೊಣೆಗಾರಿಕೆಯ ನಿರ್ವಹಣೆಯಲ್ಲಿ ಅನಿವಾರ್ಯ ಪರಿಸ್ಥಿತಿ ಇರುತ್ತದೆ. ಗರ್ಭಿಣಿಯಿದ್ದಾಗ, ಬಾಣಂತಿಯಾಗಿದ್ದಾಗ, ಮಗುವಿನ ಆರೈಕೆ ಮಾಡುವಾಗ ಕೆಲವೊಂದು ಸೌಲಭ್ಯಗಳನ್ನು ಅವಳಿಗೆ ಕೊಡಲೇಬೇಕಾಗುತ್ತದೆ. ಆ ಸಂದರ್ಭಗಳು ಅವಳ ವೈಯಕ್ತಿಕ ಸಮಸ್ಯೆಗಳಲ್ಲ, ಬದಲಿಗೆ ಅವಳು ಆ ಸಮಯದಲ್ಲಿ ಕೌಟುಂಬಿಕ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿರುತ್ತಾಳೆ. ಇತ್ತೀಚೆಗೆ ಕೇಂದ್ರ ಸರ್ಕಾರ Maternity Benefit Act ನ್ನು ತಿದ್ದುಪಡಿ ಮಾಡಿ ಉದ್ಯೋಗಸ್ಥ ಮಹಿಳೆಯರಿಗೆ ನೀಡುವ ಮಾತೃತ್ವದ ರಜೆಯನ್ನು ಹೆಚ್ಚಿಸಿರುವುದು ಶ್ಲಾಘನೀಯ. ಇಲ್ಲವಾದಲ್ಲಿ ಉದ್ಯೋಗಸ್ಥ ಮಹಿಳೆ ಹೆಚ್ಚಿನ ಸಂದರ್ಭದಲ್ಲಿ ಕೆಲಸಕ್ಕೆ ರಾಜೀನಾಮೆ ಕೊಡಬೇಕಾಗುತ್ತಿತ್ತು, ಇಲ್ಲವೇ ಮಾಲಿಕರೇ ಅವಳನ್ನು ಈ ಕಾರಣಕ್ಕೆ ಕೆಲಸದಿಂದ ತೆಗೆದುಹಾಕುವ ಪರಿಸ್ಥಿತಿ ಇರುತ್ತಿತ್ತು. ಇದರೊಂದಿಗೆ, ವೇತನರಹಿತ ರಜೆಯಾದರೂ ಪರವಾಗಿಲ್ಲ, ಮಗು ಸ್ವಲ್ಪ ಬೆಳೆಯುವವರೆಗೆ 1-2 ವರ್ಷಗಳ ಕಾಲ ತಾಯಿ ಮನೆಯಲ್ಲಿದ್ದು ಮಗುವಿನ ಆರೈಕೆಗೆ ಗಮನ ಕೊಡುವಂತೆ ಮಾಡಿ, ಆ ನಂತರ ಪುನಃ ತನ್ನ ವೃತ್ತಿಗೆ ಮರಳುವ ಅವಕಾಶ ಕಲ್ಪಿಸುವುದರ ಬಗ್ಗೆಯೂ ವಿಚಾರಮಾಡಬೇಕಾದ ಕಾಲ ಇದಾಗಿದೆ. ಮನೆಯಿಂದಲೇ ಕೆಲಸ ಮಾಡುವ ಕ್ರಮವನ್ನೂ ರೂಪಿಸಬೇಕಾಗುತ್ತದೆ. ಇಲ್ಲವಾದಲ್ಲಿ ಮಹಿಳೆ ತನ್ನ ವೃತ್ತಿ ಮತ್ತು ಕೌಟುಂಬಿಕ ಕರ್ತವ್ಯ ನಿರ್ವಹಣೆಯಲ್ಲಿ ಸಮತೋಲನ ಕಾಪಾಡಿಕೊಳ್ಳಲಾಗದೇ ಕಷ್ಟಪಡಬೇಕಾಗುತ್ತದೆ. ಸಮಾನತೆ ಕಾಪಾಡಲು ಮಹಿಳೆಗೆ ಇಂತಹ ವಿಶೇಷ ಸಂದರ್ಭಗಳಲ್ಲಿ ವಿಶೇಷ ಸೌಲಭ್ಯ ಕಲ್ಪಿಸಬೇಕಾಗುತ್ತದೆ. ಇದು ಅವಳ ಹಕ್ಕು, ಅವಳ ಬಗ್ಗೆ ತೋರಿಸುವ ಕನಿಕರವಲ್ಲ, ರಿಯಾಯಿತಿಯಲ್ಲ.
ಇದು ಅವಳ ಹಕ್ಕು — ಕನಿಕರವಲ್ಲ, ರಿಯಾಯಿತಿಯಲ್ಲ.
ಉದ್ಯೋಗಸ್ಥ ಮಹಿಳೆಯರಿಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚಿತವಾಗುತ್ತಿರುವ ವಿಷಯ ಅವಳ ರಾತ್ರಿಪಾಳಿಯ ಬಗ್ಗೆ. ಅದರಲ್ಲೂ ಕಾಲ್ ಸೆಂಟರ್ ಉದ್ಯೋಗಗಳಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಕೊಳ್ಳುವ ಕಾಲದಲ್ಲಿ ಈ ಸಮಸ್ಯೆ ಮಹತ್ವವನ್ನು ಪಡೆದುಕೊಂಡಿದೆ. ಮಹಿಳಾ ಕಾರ್ಮಿಕರಿಗೆ ರಕ್ಷಣೆ ಇರಬೇಕೆನ್ನುವ ನಿಟ್ಟಿನಲ್ಲಿ ನಮ್ಮ ದೇಶದ ಕಾರ್ಮಿಕ ಕಾನೂನುಗಳಲ್ಲಿ ಮಹಿಳೆಯರಿಗೆ ರಾತ್ರಿಪಾಳಿಯನ್ನು ನಿಷೇಧಿಸಲಾಗಿತ್ತು. ಆದರೆ, ಇಂದಿನ ಅನೇಕ ಉದ್ಯೋಗವಕಾಶಗಳಲ್ಲಿ ರಾತ್ರಿಪಾಳಿ ಮಾಡುವುದು ಅವಶ್ಯಕವಾಗಿರುವುದರಿಂದ ರಾತ್ರಿಪಾಳಿಯ ನಿರ್ಬಂಧ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುವಂತಾಯಿತು. ಹಾಗಾಗಿ ರಾತ್ರಿಪಾಳಿಯ ನಿರ್ಬಂಧವನ್ನು ತೆಗೆದುಹಾಕಬೇಕೆನ್ನುವ ಬೇಡಿಕೆ – ಒತ್ತಾಯ ಮಹಿಳೆಯರಿಂದಲೇ ಬರಲಾರಂಭಿಸಿತು. ಮಹಿಳಾ ಸಂಘಗಳು ಅದನ್ನು ತಮ್ಮ ಹಕ್ಕೆಂದು ಪ್ರತಿಪಾದಿಸಿದರು. ಹಾಗಾಗಿ ಅನೇಕ ಉದ್ಯೋಗಗಳಲ್ಲಿ ಇಂದು, ಕಾನೂನು ತಿದ್ದುಪಡಿಯ ಮೂಲಕ, ರಾತ್ರಿಪಾಳಿಯಲ್ಲಿ ಮಹಿಳೆಯರಿಗೆ ಕೆಲಸ ಮಾಡುವ ಅವಕಾಶ ನೀಡಲಾಗಿದೆ. ಆದರೆ ಮಹಿಳೆಯರು ಈ ಹಕ್ಕನ್ನು ಅನುಭವಿಸಲು, ಹೊಣೆಗಾರಿಕೆಯನ್ನು ನಿಭಾಯಿಸಲು ಅವರಿಗೆ ಸೂಕ್ತ ರಕ್ಷಣೆ ಒದಗಿಸುವ ಜವಾಬ್ದಾರಿಯನ್ನು ಕೆಲಸದ ಮಾಲೀಕರು ಹೊರಬೇಕಾಗುತ್ತದೆ. ಮಹಿಳೆ ತನ್ನ ಘನತೆ-ಗೌರವವನ್ನು ಉಳಿಸಿಕೊಂಡು ಕರ್ತವ್ಯ ನಿರ್ವಹಿಸಲು ಸೂಕ್ತ ವಾತಾವರಣ ಸೌಲಭ್ಯವನ್ನು ಕಲ್ಪಿಸುವುದು ಮಾಲೀಕರ ಕರ್ತವ್ಯವೇ ಹೊರತು, ಅದು ಮಹಿಳೆಯರಿಗೆ ಅವರು ತೋರುವ ರಿಯಾಯತಿಯಲ್ಲ. ಈ ಕಾರಣಕ್ಕಾಗಿ ನಾವು ಮಹಿಳೆಯರಿಗೆ ಉದ್ಯೋಗವನ್ನೇ ನಿರಾಕರಿಸುತ್ತೇವೆ ಎನ್ನುವುದು ಸಂವಿಧಾನ ಬಾಹಿರವಾಗುತ್ತದೆ. ಇಂದು ರಾತ್ರಿಪಾಳಿ ಮಾಡುವ ಪುರುಷರಿಗೂ ರಕ್ಷಣೆಯ ಅವಶ್ಯಕತೆ ಇದೆ. ಮಧ್ಯರಾತ್ರಿಯಲ್ಲಿ ಕ್ಯಾಬ್‌ಗಳಲ್ಲಿ ಬಂದು-ಹೋಗಿ ಮಾಡುವುದಕ್ಕಿಂತ ಬೇಗನೇ ಹೋಗಿ ಅಲ್ಲಿಯೇ ಮಲಗಲು ಅಥವಾ ಬೆಳಗಾಗುವವರೆಗೆ ಅಲ್ಲಿಯೇ ಮಲಗಿದ್ದು ಬರಲು ಡಾರ್ಮಿಟರಿಗಳ ವ್ಯವಸ್ಥೆ ಮಾಡಿದರೆ ಈ ಸಮಸ್ಯೆಗೆ ಒಂದು ಪರಿಹಾರ ಸಿಗಬಹುದು. ಉದ್ಯೋಗಿಗಳ ರಕ್ಷಣೆಯಲ್ಲದೇ ಆರೋಗ್ಯ ರಕ್ಷಣೆಗೂ ಇದು ನೆರವಾಗಬಹುದು. ಹಿಂದೆ Telephone Exchangeಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಉದ್ಯೋಗಿಗಳು ರಾತ್ರಿಪಾಳಿ ಮಾಡುವಾಗ ಈ ವ್ಯವಸ್ಥೆ ಕಲ್ಪಿಸಿದ್ದು, ನಿಶ್ಚಿಂತೆಯಿಂದ ಮಹಿಳೆಯರು ರಾತ್ರಿಪಾಳಿ ಮಾಡುತ್ತಿದ್ದುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಕೆಲವೊಮ್ಮೆ ಹಳೆಯ, ಸಾಂಪ್ರದಾಯಿಕ ವ್ಯವಸ್ಥೆಗಳೇ ಆಧುನಿಕ ಸಮಸ್ಯೆಗಳಿಗೂ ಉತ್ತರವಾಗಬಲ್ಲವು.
ಸಾಂಪ್ರದಾಯಿಕ ವ್ಯವಸ್ಥೆ ಎಂದಾಗ ಕುಟುಂಬ ವ್ಯವಸ್ಥೆ ಅದರಲ್ಲಿ ಪ್ರಧಾನವಾದುದು. ಇಂದಿಗೂ ಭಾರತದಲ್ಲಿ ಕುಟುಂಬ ವ್ಯವಸ್ಥೆಯ ಬಗ್ಗೆ ನಂಬಿಕೆ ಇದೆ. ಆದರೆ ಕೆಲವೊಮ್ಮೆ ಈ ಕುಟುಂಬ ವ್ಯವಸ್ಥೆಯ ದೋಷಗಳೇ ಅದರಲ್ಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ. ಕುಟುಂಬದ ಒಳಗೆ ವ್ಯಕ್ತಿಗಳು ಅನುಭವಿಸುವ ಸಂಕಟ-ಸಂಕಷ್ಟಗಳು, ಅದರಿಂದ ಹೊರಬರಲು ಆಗದ ಪರಿಸ್ಥಿತಿಗಳು, ಕಾನೂನು ಸಮರ, ನ್ಯಾಯಾಲಯದಲ್ಲಿನ ವಿಳಂಬ ಕುಟುಂಬದ ವ್ಯವಸ್ಥೆಯಲ್ಲಿ ಸಿಕ್ಕಿಹಾಕಿಕೊಳ್ಳದೇ ಸಾಂಗತ್ಯ-ಸಂತೋಷ-ನೆಮ್ಮದಿ ಕಂಡುಕೊಳ್ಳಲು ಕುಟುಂಬ/ವೈವಾಹಿಕ ಸಂಬಂಧ ಅವಶ್ಯಕವೇ ಎನ್ನುವ ವಾಗ್ವಾದ ಈ ಆಧುನಿಕ ಕಾಲದಲ್ಲಿ ಆರಂಭಗೊಂಡಿದೆ. ಈ ‘ಜೊತೆಗಿರುವ’, Live-in ಸಂಬಂಧವನ್ನು ಸಮಾಜ/ಕಾನೂನು ಸ್ವಲ್ಪ ಮಟ್ಟಿಗೆ ಅಂಗೀಕರಿಸಿದೆ, ಕೌಟುಂಬಿಕ ದೌರ್ಜನ್ಯ ತಡೆ ಕಾನೂನಿನಲ್ಲಿ ಈ ಸಂಬಂಧದಲ್ಲಿರುವ ಮಹಿಳೆಯರಿಗೆ ಸಮಾನ ರಕ್ಷಣೆಯನ್ನು ಕೊಡಲಾಗಿದೆ. ಆದರೆ, ಇಂತಹ ತಾತ್ಕಾಲಿಕ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ನಿಜವಾಗಲೂ ಸ್ವಾತಂತ್ರ್ಯ-ರಕ್ಷಣೆ, ಸಾಮಾಜಿಕ ಭದ್ರತೆ ಸಿಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ಆದರೆ, ವಿವಾಹವನ್ನು ಒಂದು ಬಂಧನವೆಂದು ಭಾವಿಸುವವರಿಗೆ ಈ ಜೊತೆಗಿರುವ ಜೀವನ ಒಂದು ಬದಲಿ ಜೀವನದ ಆಯ್ಕೆಯನ್ನು ಕೊಡುತ್ತದೆ ಎಂದು ಮಾತ್ರ ಸದ್ಯಕ್ಕೆ ತಿಳಿಯಬಹುದು. ವಿವಾಹ ಖಂಡಿತ ಬಂಧನವಾಗಬಾರದು ಅಥವಾ ಅದು ವ್ಯಕ್ತಿಗಳಿಗೆ ಕಡ್ಡಾಯವೂ ಆಗಬಾರದು. ತಾನು ಯಾವಾಗ ವಿವಾಹವಾಗಬೇಕು, ಅಥವಾ ವಿವಾಹವಾಗದೇ ಉಳಿಯಬೇಕೇ ಅಥವಾ ಯಾರನ್ನು ವಿವಾಹವಾಗಬೇಕು – ಇವು ವ್ಯಕ್ತಿಗಳ ಆಯ್ಕೆಯಾಗಬೇಕೇ ವಿನಃ ಅವರ ಮೇಲೆ ಹೇರಿದ ವಿಷಯಗಳಾಗಬಾರದು.
ಆಧುನಿಕ ಯುಗದಲ್ಲಿ ಮಹಿಳೆಯರನ್ನು ಗುರುತಿಸುವ, ನೋಡುವ ದೃಷ್ಟಿಯಲ್ಲಿ, ಧೋರಣೆಯಲ್ಲಿ ಬದಲಾವಣೆಯಾಗುವುದು ಅತ್ಯಂತ ಅವಶ್ಯಕವಾಗಿದೆ. ಹೆಣ್ಣು ಗಂಡಿಗಿಂತ ಕಡಿಮೆ-ಕೀಳು, ಅವಳು ಕೇವಲ ಭೋಗದ ವಸ್ತು, ಕೆಲವೊಂದು ಕೆಲಸಕ್ಕೆ ಮಾತ್ರ ಯೋಗ್ಯ ಎನ್ನುವ ಪ್ರಚಲಿತ ಧೋರಣೆಯಿಂದ ಮಹಿಳೆಯರ ಮುನ್ನಡೆಗೆ ಬಹಳ ಹಾನಿಯಾಗುತ್ತಿದೆ, ಹೆಣ್ಣು ಮುನ್ನಡೆಯಲು ಬಿಡದೆ ಹೆಜ್ಜೆ-ಹೆಜ್ಜೆಗೂ ಕಾಡುತ್ತಿದೆ. ಪದೇ-ಪದೇ ವಯಸ್ಸನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರದ ಪ್ರಕರಣಗಳು ನಮ್ಮ ಸಮಾಜದ ಕೊಳಕಿಗೆ ಹಿಡಿದ ಕನ್ನಡಿಯಾಗಿದೆ. ಮಹಿಳೆಯರನ್ನು ಬೆದರಿಸುವ, ಮಣಿಸುವ ತಂತ್ರಗಳಾಗಿವೆ. ವರದಕ್ಷಿಣೆಯ ಭೂತ ಇಂದಿಗೂ ಬೆಂಬಿಡದ ಭಯಾನಕ ಶತ್ರುವಾಗಿದೆ. ಹೆಣ್ಣುಭ್ರೂಣ ಹತ್ಯೆ ಸಮಾಜದಲ್ಲಿ ಮಹಿಳೆ-ಪುರುಷರ ಸಮತೋಲನವನ್ನೇ ತಪ್ಪಿಸುತ್ತಿದೆ. ಮಹಿಳೆಯರನ್ನು ಗೌರವದಿಂದ ಕಂಡು, ಜೀವನದಲ್ಲಿ, ಸಮಾಜದಲ್ಲಿ ಅವರಿಗೂ ಸಮಾನ Space ಕೊಡಬೇಕೆನ್ನುವ ಆಧುನಿಕ ಮಹಿಳೆಯರ ನಿರೀಕ್ಷೆಗೆ ಸೂಕ್ತ ಪ್ರತಿಸ್ಪಂದನೆ ದೊರಕದಿದ್ದಲ್ಲಿ ಸಮಾಜ/ದೇಶ ಮುನ್ನಡೆಯುವುದರ ಬದಲು, ಹೆಜ್ಜೆ-ಹೆಜ್ಜೆಗೂ ಸಂಘರ್ಷ ಎದುರಿಸಬೇಕಾಗುತ್ತದೆ. ಬದಲಾವಣೆ ಅನಿವಾರ್ಯ, ಬದಲಾವಣೆ ಜೀವಂತಿಕೆಯ ಲಕ್ಷಣ, ಮುನ್ನಡೆಯ ಸೂಚನೆ ಎಂದು ಬೇಗ ಒಪ್ಪಿಕೊಂಡಷ್ಟು ಎಲ್ಲರಿಗೂ ಒಳ್ಳೆಯದು.